ಆ ದಿನ ಮೈಸೂರಿನ ಕಲಾಮಂದಿರದಲ್ಲಿ ಎನ್ಐಐಟಿಯ ‘ಅಫಿನಿಟಿ ಡೇ‘. ನೂರಾರು ಯುವಕ ಯುವತಿಯರು ಹುರುಪಿನಿಂದ ಸೇರಿದ್ದರು. ಸಂಜೆ ಇಳಿಯುತ್ತಿದ್ದಂತೆ ನೆರೆದವರ ಉತ್ಸಾಹ ಏರುತ್ತಿತ್ತು. ಯುವ ಜನತೆಯ ಅಭಿರುಚಿಗೆ ಹೊಂದುವಂತಹ ಕಾರ್ಯಕ್ರಮಗಳೇ ಹೆಚ್ಚಾಗಿದ್ದರಿಂದ ಸಂಜೆ ಕಳೆಕಟ್ಟಿತ್ತು. ಕೊನೆಯ ಕಾರ್ಯಕ್ರಮದಲ್ಲಿ ‘Jewel Thief’ ಚಿತ್ರದಲ್ಲಿ ವೈಜಯಂತಿ ಮಾಲಾಳ ಧಿರಿಸಿನಲ್ಲಿದ್ದ ಆಕೆ ‘ಹೋಟೋಂಪೆ ಐಸಿ ಬಾತ್ ಮೆ ದಬಾಕೆ ಚಲಿ ಆಯಿ…’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಳು.
ಈ ಕಾರ್ಯಕ್ರಮಕ್ಕಾಗಿ ನಮ್ಮ ತಂಡದಲ್ಲಿ ಒಂದಾಗಿ ಅಭ್ಯಾಸ ನಡೆಸಿದ, ಗ್ರೀನ್ ರೂಮಿನಲ್ಲಿ ಚುರುಕಾಗಿ ಓಡಾಡಿ ಉಳಿದವರಿಗೆ ನೆರವಾಗಿ ಕೊನೆಗೆ ಅವರಿಗಿಂತ ಮೊದಲೇ ತಯಾರಾಗಿ, ಉತ್ಸಾಹದ ಚಿಲುಮೆಯಂತಿದ್ದ ಆ ಹುಡುಗಿಯ ಮುಖ ಕಣ್ಣಿಗೆ ಕಟ್ಟಿದಂತಿದೆ. ತನ್ನೊಂದಿಗೆ ದೇವಾನಂದ್ ಪಾತ್ರ ಮಾಡುತ್ತಿದ್ದ ಹುಡುಗ ತೀರಾ ಉದ್ದ ಎಂದು ದೂರಿ, ಅವನ ಬದಲಿಗೆ ಬಂದವನಿಗೆ ಹೆಜ್ಜೆಯೇ ಹಾಕಲು ಬಾರದು ಎಂದು ಕೊರಗಿ, ಕೊನೆಗಂತೂ ‘ಷೋ‘ ಮುಗಿಸಿಕೊಟ್ಟಿದ್ದಳು. ಕಳೆದೊಂದು ವಾರದಿಂದ ಅವಳ ಫೋಟೊ ಬಹಳಷ್ಟು ಪತ್ರಿಕೆಗಳಲ್ಲಿ ಬಂದಿದ್ದರಿಂದ ಈ ಎಲ್ಲಾ ಘಟನೆಗಳು ನೆನಪಾದವು.
ಅವಳ ಫೋಟೊ ಪತ್ರಿಕೆಗಳಲ್ಲಿ ಬರುವುದೇನೂ ಹೊಸದಲ್ಲ. ಹಿಂದೆಯೂ ಸಾಕಷ್ಟು ಬಾರಿ ನೋಡಿದ್ದೇನೆ. ಆದರೆ ಆಗ ಈ ರೀತಿ ವಿಷಾದ ಆವರಿಸಿರಲಿಲ್ಲ. ಎನ್ಐಐಟಿಯಲ್ಲಿ ಸಿಕ್ಕಿದ್ದ ಕಾಲಕ್ಕವಳು ಇನ್ನೂ ಪಿಯುಸಿ ಓದುತ್ತಿದ್ದಳು. ಆಗಲೇ ಮಾಡೆಲಿಂಗ್ ಹುಚ್ಚು ಹತ್ತಿಸಿಕೊಂಡು ಓಡಾಡುತ್ತಿದ್ದಳು. ನೃತ್ಯದಲ್ಲಿ ಗತಿಯೂ ಇತ್ತು, ಜೊತೆಗೆ ತಾನು ವಸುಂಧರಾ ಅವರ ಶಿಷ್ಯೆ ಎಂದು ಹೆಮ್ಮೆಪಡುತ್ತಿದ್ದಳು. ಯಾವತ್ತಿಗೂ ಚೆಂದಕ್ಕೆ ಡ್ರೆಸ್ ಮಾಡಿಕೊಂಡು ಮೇಕಪ್ಪಿನಲ್ಲೇ ಇರುತ್ತಿದ್ದ ಅವಳನ್ನು ‘ಇಷ್ಟೊಂದು ಮೇಕಪ್ ಹೊತ್ತುಕೊಂಡೇ ಮಲಗ್ತೀಯಾ?’ ಎಂದು ಕಾಡುತ್ತಿದ್ದೆವು. ಯಾವುದಕ್ಕೂ ಬೇಸರಿಸದೆ ‘ಏ ಕಮಾನ್‘ ಎಂದು ಚೆಂದದ ನಗೆ ಬೀರುತ್ತಿದ್ದಳು. ಮಣಿ ಅಂಗಡಿಗೆ ದಾಳಿಯಿಟ್ಟು ಬರಗಾಲ ದೇಶದಿಂದ ಬಂದವರಂತೆ ನಾವೆಲ್ಲಾ ಕಟ್ಲೆಟ್, ಪಾನಿಪುರಿ, ಮಸಾಲೆಪುರಿ ತಿನ್ನುವಾಗ ‘ಟೂ ಮಚ್ ಆಫ್ ಕ್ಯಾಲರೀಸ್‘ ಎಂದು ಭೇಲ್ ಪುರಿಯಲ್ಲಿ ತೃಪ್ತಿ ಹೊಂದುತ್ತಿದ್ದಳು. ತನ್ನ ಟ್ರೆಂಡಿ ಜಾಕೆಟ್ ಮತ್ತು ಹ್ಯಾಂಡ್ ಬ್ಯಾಗ್ ಗಳು ಎಲ್ಲೆಲ್ಲಿಂದ ಬಂದಿದ್ದು ಎಂಬ ಜಂಬಭರಿತ ಲಿಸ್ಟನ್ನು ಕೇಳುವ ಮುನ್ನವೇ ಕೊಡುತ್ತಿದ್ದಳು. ಕೈನೆಟಿಕ್ ನಲ್ಲಿ ಸುತ್ತಾಡುತ್ತಿದ್ದ ಅವಳಿಗೆ ಕಾಲೇಜು, ಕ್ಲಾಸು ಇವೆಲ್ಲಾ ತನಗಲ್ಲ ಎಂಬ ದೃಢ ನಂಬಿಕೆಯೂ ಇತ್ತು!
ಎನ್ಐಐಟಿಯಲ್ಲಿ ನಾನು ಕಡಿದು ಕಟ್ಟೆ ಹಾಕಿದ್ದು ಮುಗಿದಿತ್ತು. ಅವಳ ಕೋರ್ಸ್ ಮುಗಿಯಿತಾ… ಗೊತ್ತಿಲ್ಲ. ನಂತರ ಮಾತಿಗೆಲ್ಲೂ ಸಿಗದಿದ್ದರೂ ಚಲನಚಿತ್ರಗಳಲ್ಲಿ ಅವಕಾಶ ಸಿಕ್ಕಿದ್ದು ತಿಳಿಯಿತು. ಹಾಗೊಂದಿಷ್ಟು ಬಾರಿ ಸಿನೆಮಾ ಪುಟಗಳಲ್ಲಿ ಅವಳ ಫೋಟೊಗಳೂ ಬಂದವು. ಅಂತೂ ಹುಡುಗಿ ರಯಿಸುತ್ತಿದ್ದಾಳೆ ಎಂದುಕೊಂಡು ಮರೆತುಬಿಟ್ಟಿದ್ದೆ. ಆದರೆ ಈ ಬಾರಿ ಅವಳ ಫೋಟೊ ಬಂದಾಗ ಅದಕ್ಕೆ ಯಾವುದೇ ಸಿನೆಮಾದ ಶೀರ್ಷಿಕೆ ಇರಲಿಲ್ಲ, ಬದಲಿಗೆ ‘ಕಿಲ್ಲರ್, ಹಂತಕಿ‘ ಎಂಬೆಲ್ಲಾ ಹಣೆಪಟ್ಟಿಯಿತ್ತು. ಜೊತೆಗೆ, ಮರಿಯಾ ಮೋನಿಕಾ ಎಂಬ ನಟಿಯ ಪ್ರವರಗಳೂ ಇದ್ದವು.
ಚೆಂದದ ನಗುವಿನ, ತುಂಟ ಕಣ್ಣಿನ, ಮಹತ್ವಾಕಾಂಕ್ಷೆಯ ಹುಡುಗಿ ಈಗ ಏನೆಲ್ಲಾ ಆಗಿಹೋದಳು, ಯಾವ ಮಟ್ಟಕ್ಕೆ ಇಳಿದುಹೋದಳು ಎಂದು ಒಮ್ಮೆ ತೀರಾ ಬೇಸರವಾಯಿತು. ಬಣ್ಣದ ಲೋಕದ ಹಣೆಬರವೇ ಅಷ್ಟು ಎಂಬ ಅರ್ಧ ಸತ್ಯದ, ಔಪಚಾರಿಕ ಸಮಾಧಾನವನ್ನೂ ಮಾಡಿಕೊಂಡೆ. ಬೇಡ ಬೇಡ ಎಂದುಕೊಂಡೇ ಪ್ರಕರಣದ ಹಿಂದು-ಮುಂದೆಲ್ಲಾ ಪತ್ರಿಕೆಗಳಲ್ಲಿ ಓದಿದೆ. ಅವಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದ ಪೊಲೀಸರು ಇಡೀ ಘಟನೆಯ ಮರುಸೃಷ್ಟಿ ಮಾಡುತ್ತಿದ್ದಾರೆ ಎಂದೆಲ್ಲಾ ಪತ್ರಿಕೆಗಳಲ್ಲಿ ಬರೆದಿತ್ತು.
ಹಾಗೆಯೇ ಕಳೆದು ಹೋದ ಸಮಯವನ್ನೂ ತಿದ್ದಿ, ಸರಿಪಡಿಸಿ ಮರುಸೃಷ್ಟಿ ಮಾಡಲಾಗುವಂತಿದ್ದರೆ… ನನ್ನ ಯೋಚನೆಗೆ ನನಗೇ ನಗು ಬರುತ್ತಿದೆ.